Tuesday, May 12, 2009

ಯಾರದೀ ತಪ್ಪು...?







ಇದೆಲ್ಲಾ ಯಾವಾಗಾಯ್ತು? ನಮ್ಮಿಬ್ಬರ ಮಧ್ಯೆ ಪ್ರೀತಿಯೆಂಬುದು ಟಿಸಿಲೊಡೆದು ಕವಲಾಗಿ, ಕಸಿಯೊಡೆದು ಸಸಿಯಾಗಿದ್ದು ನನ್ನ ಮನಸ್ಸಿಗೆ ತಿಳಿಯದೇ ಹೋಗಿತ್ತೇ ಅಥವಾ ಅದನ್ನೇ ಗೆಳೆತನವೆಂದು ತಪ್ಪಾಗಿ ಗ್ರಹಿಸಿದ್ದೆನೆ, ತಿಳಿಯುತ್ತಿಲ್ಲ ಗೆಳೆಯಾ...
ಈಗ ಅದೇಕೊ ಒಂಟಿತನದ ಭಾವ ಅತಿಯಾಗಿ ಕಾಡುತ್ತಿದೆ. ಮತ್ತೆ ನಿನ್ನ ನೆನಪೇ ನನ್ನ ಜೊತೆಗಾರ್ತಿ... ನೀ ಜೊತೆ ಇದ್ದಾಗ ಆಡಿದ ಜಗಳಗಳೆಷ್ಟೋ, ಮಾಡಿದ ತುಂಟಾಟಗಳೆಷ್ಟೋ, ಮುನಿಸಿಕೊಂಡದ್ದೆಷ್ಟು ಬಾರಿಯೋ ಲೆಕ್ಕವಿಟ್ಟವರಾರು ಗೆಳೆಯಾ... ಆದರೆ ಈಗ...
ನೀನು ಭರವಸೆಯ ಕೈಯೊಂದನ್ನು ನನ್ನ ಹೆಗಲಿನ ಮೇಲಿಟ್ಟ ದಿನ ನನಗಿನ್ನೂ ಸರಿಯಾಗಿ ನೆನಪಿದೆ ಗೆಳೆಯಾ... ನಿನ್ನ ಕೈ ಬೆರಳಚ್ಚು ಇನ್ನೂ ನನ್ನ ಬೆನ್ನ ಮೇಲಿದೆ ಎಂದುಕೊಳ್ಳುತ್ತಲೇ ಮುಂದುವರೆಯುತ್ತಿದ್ದೆ. ಆದರೆ ಅದು ಎಷ್ಟುದಿನ ಸಾಧ್ಯ? ಹಲವು ಬಾರಿ ನನ್ನ ಕನಸಿನ ಆಶಾಗೋಪುರ ಮುರಿದು ಬಿದ್ದ ಅನುಭವವಾಗುತ್ತಿದೆ.
ಕೊನೆಗೂ ನಾನೇ ತಪ್ಪು ಮಾಡಿದ್ದೆ ಎಂದು ನಿನಗನಿಸಿದ್ದರೆ ಎರಡೇಟು ಹೊಡೆದು ಬುದ್ದಿಮಾತು ಹೇಳಬಹುದಿತ್ತಲ್ಲ, ಆದರೆ ನೀನು ನನ್ನ ಮೌನವಾಗಿ ಕಾಡಿದೆ, ಕಂಗೆಡಿಸುವಂತೆ ಮಾಡಿದೆ, ಕಾರಣವೆ ಹೇಳದೆ ನನ್ನ ಬಿಟ್ಟು ಹೋದೆ. ಅದೆಷ್ಟು ದಿನ ನಾನು ರಾತ್ರಿ ನಿದ್ದೆ ಕೆಟ್ಟು ನಿನ್ನ ಹಾದಿ ಕಾದಿರುವೆನೆಂಬ ಊಹೆ ನಿನಗಿದೆಯೇ? ನನಗೊತ್ತು ನೀ ಧಿಕ್ಕರಿಸಿ ಹೊರಟ ದಿನದಿಂದಲೇ ನನ್ನ ಮರೆಯಲು ಪ್ರಯತ್ನಿಸುತ್ತೀಯಾ ಹಾಗೂ ಅದೇ ಹಠದಲ್ಲಿ ಮತ್ತೆ ಕೆಟ್ಟ ಚಟಗಳ ದಾಸನಾಗಿರುತ್ತೀಯಾ...
ಬೇಡ ಗೆಳೆಯಾ, ಇದೆಲ್ಲಾ ಬೇಡ. ಮತ್ತೆ ಹಿಂದೆ ಬಂದು ಬಿಡು, ಹೊಸ ಜೀವನ ಪ್ರಾರಂಭಿಸೋಣ, ಕನಸುಗಳ ಗೂಡು ಕಟ್ಟೋಣ. ನಿನ್ನ ಬೆಚ್ಚನೆಯ ಕೈಯೊಳಗೆ ನನ್ನ ಪುಟ್ಟ ಕೈ ಬೆಸೆದು ಮತ್ತೆ ಮುಸ್ಸಂಜೆಗಳ ಪಯಣಕ್ಕೆ ಅಣಿಯಾಗೋಣ...
ಬರುತ್ತೀಯಲ್ಲಾ ಗೆಳೆಯಾ ...
ಕಾಯುತ್ತಿರುವ,
ನಿನ್ನ ಮುದ್ದು...

Monday, May 11, 2009

ಮೊದಲ ಮಾತು.....

ಸವಿ ನಿನ್ನ ಬ್ಲಾಗ್ ಅಡ್ರೆಸ್ ಕೊಡೇ ಎಂದು ಗೆಳೆಯ ಕಾಲೆಳೆದಾಗಲೇ ಅರಿವಾದದ್ದು ನಾನಿನ್ನೂ ತುಂಬಾ ಹಿಂದುಳಿದಿದ್ದೇನೆಂದು... ಅಂದೇ ನಾನೇನೂ ಕಡಿಮೆಯಿಲ್ಲ ಎಂಬ ಗತ್ತಿನೊಂದಿಗೆ ಸೈಬರ್ಗೆ ತೆರಳಿ ಬ್ಲಾಗ್ ಗಳನ್ನೆಲ್ಲಾ ತಡಕಾಡಿದೆ. ಪಕ್ಕದಲ್ಲಿ ಕುಳಿತಿದ್ದ ಗೆಳತಿ ಒಳ್ಳೆ ಹೆಸರು ಸಿಕ್ಕಿದೆಯಾ ಎಂದಾಗ ಜೋರಾಗಿ ತಲೆಯಾಡಿಸಿಯೂ ಇದ್ದೆ.
ಆದರೆ ಮುಂದೆ ಆದದ್ದೇ ಬೇರೆ...ನನ್ನ ಇಷ್ಟದ ಹೆಸರುಗಳಾದ ಕನಸು, ನಿಸರ್ಗ, ಮೌನ(ನಿ), ದನಿ....ಯಾವ ಹೆಸರೂ ಲಭ್ಯವಿಲ್ಲ. ದಾರಿಕಾಣದೆ ಕೊನೆಗೆ ನನ್ನ ಹೆಸರಿನ ಅರ್ಧಭಾಗವನ್ನು ಇಟ್ಟು ಅದರ ಅರ್ಥವನ್ನು ಇನ್ನರ್ಧ ಭಾಗವಾಗಿಸಿದಾಗ ಮೂಡಿಬಂದ ಚಂದದ ಹೆಸರೇ ಸವಿಸಿಹಿ...
ಕೊನೆಗೂ ಬ್ಲಾಗ್ಏನೋ ತಯಾರಾಯ್ತು... ಆದರೆ ಬರಹ...... ನಿಜವಾದ ಕಷ್ಟ ಆರಂಭವಾದದ್ದೇ ಇಲ್ಲಿ...... ಏನು ಬೇಕಾದರೂ ಬರೀಬಹುದಂತೆ ನಿಂಗಿಷ್ಟ ಬಂದಿದ್ದು ಅಂತ ಯಾರೋ ಹೇಳಿದು ನೆನಪಾಯ್ತು... ಹಾಗಂತ ಬಾಯಿಗೆ ಬಂದಿದ್ದು ಬರ್ಯೋಕಾಗುತ್ತೇ...... ದೂರದ ಗೆಳೆಯನೊಬ್ಬ ನೀ ಸುಮ್ನೆ ಟೈಮ್ ಪಾಸ್ಗೆ ಬರೆಯೋದಾದ್ರೆ ಬ್ಲಾಗ್ ಓಪನ್ ಮಾಡೋದೇ ಬೇಡ... ಬರವಣಿಗೆ ಹಿಂದೆ ಸ್ವಲ್ಪ ಪರಿಶ್ರಮ ಇರಬೇಕು, ಅದೂ ಕಾಣುವಂತೆ... ಎಂದು ಬೆದರಿಕೆ ಹಾಕಿದ್ದ... (ಅವನ ಮಾತು ಎಷ್ಟರಮಟ್ಟಿಗೆ ನಿಜವಾಗುವುದೋ ಇನ್ನು ಕಾದು ನೋಡಬೇಕಷ್ಟೇ...)
ಆಂತೂ ಚೊಚ್ಚಲ ಹೆರಿಗೆಯಂತೆ ಬ್ಲಾಗ್ ತಯಾರಾಗಿದೆ. ತಿಂದ ನೋವು ಮಗುವಿನ ಮುಖ ಕಂಡಾಕ್ಷಣ ಮರೆಯುವಂತೆ ಪಟ್ಟ ಕಷ್ಟ ನೀವು ಓದಿದರೆ ಮಾತ್ರ ಸಾರ್ಥಕ... ಓದಿ, ತಪ್ಪಿದ್ದಲ್ಲಿ ತಿದ್ದಿ, ಗೆಳೆಯರಿಂದ, ಹಿರಿಯರಿಂದ ಬೈಸಿಕೊಳ್ಳುವುದರಲ್ಲೂ ಖುಷಿ ಇದೆ ಅಲ್ಲವೇ...?

Thursday, May 7, 2009

hai........