Tuesday, May 18, 2010

ಕನಸು


ನಿನ್ನ ಪ್ರೀತಿಯ


ಕಣ್ಣ ರೆಪ್ಪೆಯೊಳಗೆ


ಕಳೆದು ಹೋಗುವ ಮುನ್ನ


ನಾ


ಆಗಸಕ್ಕೇ ಹಾರಿ ಬಿಡಲೇ


ಹಕ್ಕಿಯಂತೆ...?

Sunday, March 7, 2010

ನಂಗೆ ಉತ್ತರ ಬೇಕು ಅಷ್ಟೇ...
ನಿಜವಾಗ್ಲು ತಿರುಗುತ್ತಿರುವುದು ಯಾವುದು ಅಂತ...

ಮತ್ತೆ ನಿನದೇ ನೆನಪು...


ಯಾಕೋ ಗೊತ್ತಿಲ್ಲ ಬದಲಾವಣೆ ಅಂದರೆ ಇದೇನಾ ಅಂತ ಅನಿಸೋಕೆ ಶುರುವಾಗಿದೆ. ಹಿಂದೆಲ್ಲಾ ಕತ್ತಲ್ಲಲ್ಲಿ ಕಣ್ಣರಳಿಸಿ ಕೂರುವುದು ಅಂದರೆ ಪ್ರಾಣ ಬಿಡುತ್ತಿದ್ದೆ, ಅದೇ ಜಗಲಿಯಲ್ಲಿ ಕಾಲು ಚಾಚಿ ಮಲಗಿ ನಕ್ಷತ್ರಗಳನ್ನು ಎಣಿಸುವುದರಲ್ಲಿ ನಾ ಕಳೆದು ಹೋಗುತ್ತಿದ್ದೆ. ಅಂದೆಲ್ಲಾ ಮೌನದೇವತೆ ಇಷ್ಟವಾಗುತ್ತಿದ್ದಳು.

ಆದರೆ ಇಂದು ಒಂದು ಕ್ಷಣ ಸುಮ್ಮನಿರುವುದೆಂದರೂ ಏನೋ ಆಲಸ್ಯ, ಜಡತನ. ಕತ್ತಲಲ್ಲಿ ಕಳೆದು ಹೋಗುವೆನೆಂಬ ಭಯ ಕಾಡಿ ಪಕ್ಕನೆ ಮೇಣದ ಬತ್ತಿ ಹಚ್ಚಿಟ್ಟು ಹರಟೆ ಹೊಡೆಯಲು ಆರಂಭಿಸುತ್ತೇನೆ. ಮತ್ತೆ ಆ ನಕ್ಷತ್ರಲೋಕ ಮಕ್ಕಳಾಟ ಎನಿಸತೊಡಗಿದೆ.

ಯಾಕೆ ಹೀಗೆ...?ಇದು ಎಂದಿನಿಂದ ಹೀಗೆ ಯೋಚಿಸುತ್ತಾ ಕುಳಿತಿದ್ದೇನೆ... ಆದರೆ ನಿನ್ನ ಹೊರತಾಗಿ ಮನ ಬೇರೇನನ್ನೂ ನೆನಪಿಸಿಕೊಳ್ಳುವುದೇ ಇಲ್ಲ. ಅದು ಹೇಗೆ ನೀ ನನ್ನ ಮನಸ್ಸೆಂವ ಜೋಕಾಲಿಯ ಜೊತೆಗಾತಿಯಾದೆಯೋ ದೇವರೇ ಬಲ್ಲ... ಬಂದ ಹಾಗೆ ಮನಸಿಗೆ ಗಾಯ ಮಾಡಿ ಅಂತರ್ಗತನಾದೆಯಲ್ಲ ಯಾಕೆ? ಕಣ್ಣುಗಳಿಂದಲೇ ಸದೆಬಡಿಯುವ ನಿನ್ನ ನೋಟ ಮನದಲ್ಲೇ ತಾಜ್ಮಹಲ್ ಕಟ್ಟುವ ಮೌನ ಪ್ರೀತಿ ಇವೆಲ್ಲ ನನಗೆ ಇಷ್ಟವಾಗಿತ್ತು. ಆದರೆ ಈಗ ಅದು ಬರೀ ನೆನಪು ಮಾತ್ರ.

ನೀ ಬರುವ ಮೊದಲು ಎಲ್ಲವೂ ಸರಿಯಿತ್ತು ನೋಡು. ನಾ ನಾನಾಗಿ ನನ್ನೊಳಗೆ ಅವಿತಿದ್ದೆ, ನನ್ನದೇ ಪ್ರಪಂಚ ನೂರೆಂಟು ಕನಸುಗಳು. ಹುಡುಗಿಯರ ಮನಸ್ಸು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲವೋ ಪೆದ್ದು...

ಅದೆಲ್ಲಾ ಬಿಡು. ನನ್ನ ಬದಲಾವಣೆಗಳಿಗೆ ಉತ್ತರ ಹುಡುಕುತ್ತಾ ಹೊರಟು ನಿನ್ನ ದೂಷಿಸುವುದರಲ್ಲಿ ಅರ್ಥವಿಲ್ಲ ಅಲ್ಲವೇ. ಮತ್ತೆ ನಾ ಮೊದಲಿನಂತಾಗಬೇಕು. ನಿನ್ನೊಳಗೆ ನಾ ಪೂರ್ತಿ ಕರಗಿ ಹೋಗುವ ಮುನ್ನ ಎಚ್ಚೆತ್ತುಕೊಳ್ಳಬೇಕು... ಅದಕ್ಕೇನು ಮಾಡುವುದು ಹೇಳು...?

Wednesday, February 24, 2010

ಬೈಹುಲ್ಲ ಕುಠಾರಿ


ಗದ್ದೆಯಲ್ಲಿ ಪೈರು ಬೆಳೆದ ನಂತರ ಅದರ ತೆನೆಯನ್ನು ಕೊಯ್ದು ಭತ್ತವನ್ನು ಆರಿಸಿ ಉಳಿದ ಹುಲ್ಲನ್ನು ಒಣಗಿಸಿ ದನಗಳಿಗೆ ಆಹಾರವಾಗಿ ಹಾಕಲಾಗುತ್ತದೆ. ಒಣಗಿದ ಹುಲ್ಲನ್ನು ಮಳೆಗಾಲದಲ್ಲಿ ಸಂಗ್ರಹಿಸಿಡುವುದು ಬಹಳ ಕಷ್ಟ. ಅದಕ್ಕೆಂದೇ ಈ ಕುಠಾರಿಯನ್ನು ತಯಾರಿಸಲಾಗುತ್ತದೆ. ಇದರ ವೈಶಿಷ್ಟವೆಂದರೆ ಮಳೆಗಾಲದಲ್ಲಿ ಎಷ್ಟು ಮಳೆಸುರಿದರು ಮೇಲ್ಭಾಗದ ಒಂದಿಷ್ಟು ಹುಲ್ಲು ಒದ್ದೆಯಾಗುವುದೇ ಹೊರತು ಒಳಗಿನ ಹುಲ್ಲು ಸದಾ ಬೆಚ್ಚಗಿರುತ್ತದೆ. ಇಂದಿಗೂ ಹಳ್ಳಿಗಳಲ್ಲಿ ಇದೇ ಕ್ರಮದಲ್ಲಿ ಒಣಹುಲ್ಲನ್ನು ಸಂಗ್ರಹಿಸಿಡಲಾಗುತ್ತದೆ.

ಕಸದಿಂದ ರಸ...


ಇದು ಹಳ್ಳಿಯಲ್ಲಿ ಕಾಣಸಿಗುವ ಗೆರಸೆ ಹಾಗೂ ಕುಡ್ಪುಗಳನ್ನು ಉಪಯೋಗಿಸಿಕೊಂಡು ತಯಾರಿಸಿದ ಅಲಂಕಾರಿಕ ದೀಪ. ಮನೆಯಲ್ಲಿ ಅಕ್ಕಿಯ ಕಸ ತೆಗೆಯಲು ಉಪಯೋಗಿಸುವ ಈ ಬಿದಿರಿನ ಗೆರಸೆಯನ್ನು ಮಧ್ಯದಲ್ಲಿಟ್ಟು ನಾಲ್ಕು ಕಡೆಗಳಲ್ಲಿ ಕುಡ್ಪುಗಳನ್ನಿಟ್ಟು ಅವುಗಳ ಮಧ್ಯೆ ದೀಪವನ್ನಿಟ್ಟು ಹೊಳೆಯುವಂತೆ ಮಾಡಿದ್ದು ಇತ್ತೀಚೆಗೆ ನಡೆದ ಉಜಿರೆಯ ತುಳು ಸಾಹಿತ್ಯ ಸಮ್ಮೇಳನದಲ್ಲಿ. ದಾರಿಯುದ್ದಕ್ಕೂ ಅಲಂಕಾರಿಕ ದೀಪವನ್ನಾಗಿ ಇದನ್ನು ಬಳಸಿದ್ದು ಜನರ ಆಕರ್ಷಣೆಗೆ ಪಾತ್ರವಾಯಿತು.

Monday, February 22, 2010

ಇದು ಕಲಾ ವಿಸ್ಮಯ...


ಕಲೆ ಸಂಸ್ಕೃತಿಗೆ ಪ್ರಾಮುಖ್ಯತೆ ನೀಡಿದ ಉಜಿರೆ ತುಳು ಸಮ್ಮೇಳನ ಮೂರು ದಿನಗಳ ಕಾಲ ನಡೆದಿದ್ದು ತಿಳಿದ ವಿಷಯ. ಅಲ್ಲಿನ ಅಲಂಕಾರಗಳಲ್ಲಿ ಬಹುತೇಕ ಎಲ್ಲವೂ ನಿಜ ಸಹಜ ಎನಿಸುವಂತದ್ದು. ಅವುಗಳಲ್ಲೊಂದು ಈ ಬಾಳೆ ಎಲೆ. ಬಹುತೇಕ ಸಹಜವಾದ ಬಾಳೆಎಲೆಯನ್ನೇ ಹೋಲುವ ಇದನ್ನು ಪ್ಲಾಸ್ಟಿಕ್ನಿಂದ ತಯಾರಿಸಿ ಬಣ್ಣ ಹಚ್ಚಲಾಗಿದೆ ಅಷ್ಟೆ. ಆದರೆ ನೋಡುಗರಿಗೆ ಮಾತ್ರ ಆಗಷ್ಟೇ ತೋಟದಿಂದ ಕಡಿದು ತಂದು ಉಣಬಡಿಸಲಿರುವ ಹಸಿರು ಬಾಳೆಎಲೆಯಂತೆ ಕಂಡು ವಿಸ್ಮಯ ಮೂಡಿಸಿತು.

Saturday, February 20, 2010

ಬಯಕೆ
ಬಸಿದಷ್ಟೂ ಮುಗಿಯದ
ಪಡೆದಷ್ಟೂ ತೀರದ
ತುಡಿತ ಮಿಡಿತ
ಹಂಬಲ-ಅನಂತ
ಹೃದಯ
ನಿನ್ನೆದೆಯಲ್ಲಿ
ಸದಾ ಈಜಾಡುವ
ಮೀನು ನಾನು
ಉಸಿರಿರುವವರೆಗೆ
ನಾನಿರುವೆ ಜೊತೆಗೆ
ಕೊನೆಯಾಗುವೆ
ನಿನ್ನೊಂದಿಗೆ...
ಬದುಕು
ಮುಂಜಾನೆ ಅರಳಿ
ಮುಸ್ಸಂಜೆ ಸಾಯುವ
ಕ್ಷಣಿಕ ಸುಖ
ಅದರಲ್ಲೇ ಕಂಡ
ಸಾರ್ಥಕತೆ.
ಕನಸು
ಮುಂಜಾನೆಯ
ಸಿಹಿನಿದ್ದೆಗೊಂದು
ಮತ್ತಿನ
ಉಡುಗೊರೆ
ಪ್ರೀತಿ
ಕಣ್ಣು ಮುಚ್ಚಿ
ತೆರೆಯುವುದರೊಳಗೆ ನಡೆದ
ಅವಾಂತರ
ಪ್ರಭಾವ ನಿರಂತರ
ಪ್ರೀತಿ
ಮಧುರ ಲಯದ
ಸಂಗೀತ
ಮತ್ತು ಬರಿಸುವ
ಜೋಗುಳ
ಗುಡುಗು ಮಿಂಚಿನ
ನಂತರದ
ಮುಂಗಾರು ಮಳೆ
ಕವಿತೆ
ಮನದೊಳಗೆ
ಅವಿತ
ಭಾವಗಳ
ಸಮ್ಮಿಳಿತ
ಗೆಳೆಯ
ಮೌನದೊಳಗಿನ
ಮಾತನ್ನು ಅರಿತು
ನೋವನ್ನು ಮರೆಯಿಸಿ
ಉಸಿರಾಗುವ ಜೀವ
ಹಾರೈಕೆ
ಮಧುರ ಪ್ರೀತಿ
ಎಲ್ಲೆ ಮೀರಲಿ
ಉಸಿರ ಜಯಿಸಲಿ
ಹೃದಯ ಮಿಡಿಯಲಿ
ಮನಸು ದ್ರವಿಸಲಿ
ಜನುಮ ಜನುಮದ
ಜೋಡಿಯಾಗಲಿ

ಕಾಮನಬಿಲ್ಲು
ತುಂತುರು ಮಳೆಯು
ರವಿಯ ಜೊತೆಗಾಡಿದಾಗ
ಮೂಡಿದ ಬಣ್ಣಗಳ ಸಂಗಮ
ಅವನು.
ಮನದ ಪರದೆಯಲಿ
ಕ್ಷಣಕೊಮ್ಮೆ
ಮೂಡಿ ಮರೆಯಾಗುವ
ಮಿಂಚು

ಅಂತರ್ಜಾಲವೆಂದರೆ ಆರ್ಕುಟ್ ಮಾತ್ರನಾ...?


ಇದು ಇತ್ತೀಚಿನ ದುರಂತಗಳಲ್ಲೊಂದು...ಅಂತರ್ಜಾಲ ಮಾಹಿತಿ ಕೇಂದ್ರವಾಗಬೇಕಿತ್ತು, ಸರ್ವ ಪ್ರಶ್ನೆಗಳ ಉತ್ತರ ತಾಣವಾಗಬೇಕಿತ್ತು, ಜ್ಙಾನದ ಆಗರವಾಗಬೇಕಿತ್ತು. ಆದರೆ ವಿದ್ಯಾರ್ಥಿಗಳಿಗೆ ಇದೊಂದು ಟೈಮ್ ಪಾಸ್ ಮಾಧ್ಯಮವಾಗಿದೆ ಎಂಬುದು ಕಷ್ಟವಾದರೂ ಒಪ್ಪಿಕೊಳ್ಳಬೇಕಾದ ವಿಷಯ.

ಇದು ಖಂಡಿತ ತಪ್ಪಲ್ಲ. ವಿದ್ಯಾರ್ಥಿಗಳಿಗೆ ಕಡಿಮೆ ಖರ್ಚಿನಲ್ಲಿ ಉನ್ನತ ಮಟ್ಟದ ವ್ಯಕ್ತಿಗಳೊಂದಿಗೆ ಸುಲಭ ಸಂಪರ್ಕವಿರಿಸಿಕೊಳ್ಳಬಹುದಾದ ಮಾಧ್ಯಮವಿದು. ವಿದೇಶದಲ್ಲಿರುವ ವ್ಯಕ್ತಿಗಳನ್ನು ಒಂದು ಕ್ಲಿಕ್ಗೆ ಸಂಪರ್ಕಿಸಿ ಮಾಹಿತಿ ವಿನಿಮಯ ಮಾಡಿಕೊಳ್ಳಬಹುದಾದ ಸುಲಭ ದಾರಿ ಇಲ್ಲಿದೆ. ಫೋನ್ ಅಥವಾ ಇತರ ಪ್ರಕಾರಗಳಿಗೆ ಹೋಲಿಸಿಇದರೆ ದು ಬಹಳ ಚೀಪ್ ಎಂಬುದೇನೋ ನಿಜ. ಆದರೆ ಇದು 'ಸಿಂಪ್ಲಿ ಚಾಟಿಂಗ್'ಗೆ ಮಾತ್ರ ಸೀಮಿತವಾಗಿರುವುದು ದುರದೃಷ್ಟ.

ಇಲ್ಲಿ ಹೇಳ ಹೊರಟಿರುವುದು ಕೇವಲ ಆರ್ಕುಟ್ ನ ಕತೆ ಮಾತ್ರವಲ್ಲ. ಫೇಸ್ ಬುಕ್, ಟ್ವಿಟ್ಟರ್ ಬಹುತೇಕ ಎಲ್ಲವೂ ಅಷ್ಟೇ. ಸೋಷಿಯಲ್ ನೆಟ್ವರ್ಕಿಂಗ್ ಹೆಸರಿಟ್ಟುಕೊಂಡು ಅತಿರಥ ಮಹಾರಥರನ್ನು ತನ್ನವರಾಗಿಸಿಕೊಳ್ಳುವ ತವಕದಲ್ಲಿವೆ ಅಷ್ಟೆ. ಇತ್ತೀಚೆಗೆ ಶಶಿತರೂರ್ ರ ದನದ ದೊಡ್ಡಿ ಬಹಳ ಪ್ರಾಮುಖ್ಯತೆ ಪಡೆದಿದ್ದು ಇದೇ ಟ್ವಿಟ್ಟರ್ ನಲ್ಲಿ. ಇದು ಇಂಡಿಯನ್ ಟುಡೇನ ಲೀಡ್ ನ್ಯೂಸ್ ಆಗಿಯೂ ಬಹಳ ಸುದ್ದಿ ಪಡೆಯಿತು.

ವಿಷಯವೇನೆಂದರೆ ವಿದ್ಯಾರ್ಥಿಗಳ ಹಾಗೂ ಈ ಸೋಷಿಯಲ್ ನೆಟ್ವರ್ಕಿಂಗ್ ಗಳ ಸಂಬಂಧ ಇತ್ತೀಚೆಗೆ ಬಹಳವೇ ಮಿತಿಮೀರಿದೆ. ಅಲ್ಲಿ ಪರಿಚಯವಾಗುವ ಅನಾಮಿಕ ಗೆಳೆಯರೊಂದಿಗೆ ಗಂಟೆಗಟ್ಟಲೆ ಹರಟುತ್ತಾ ಕೂರುವುದೇ ಇಂದಿನ ಫ್ಯಾಶನ್. ಆ ವ್ಯಕ್ತಿಯ ನಿಜ ಹೆಸರೂ ತಿಳಿಯದೆ ಮುಖ ಪರಿಚಯವೇ ಇಲ್ಲದೆ ಕೆಲ ನಿಮಿಷಗಳಲ್ಲೇ ತರಗತಿಗಳಲ್ಲಿ ಪಕ್ಕ ಕುಳಿತ ಗೆಳತಿಗಿಂತಲೂ ಆತ್ಮೀಯನಾಗಿಬಿಡುತ್ತಾನೆ ಆ ವ್ಯಕ್ತಿ.

ಅನೇಕ ಬುದ್ದಿವಂತ ಹುಡುಗರು ಹುಡುಗಿಯರೆಂದೂ ಹುಡುಗಿಯರು ಹುಡುಗರ ಹೆಸರಿನಲ್ಲಿ ಪ್ರೊಫೈಲ್ ಆರಂಭಿಸಿ, ಸಿಕ್ಕವರೊಂದಿಗೆಲ್ಲಾ ಚಾಟ್ ಮಾಡುತ್ತಾ ಕಾಲಹರಣ ಮಾಡುತ್ತಿರುತ್ತಾರೆ. ಆವರೆನೋ ಸಾಧಿಸಿದಂತೆ ಬೀಗುತ್ತಾ... ತಮ್ಮ ಬಿಡುಸಮಯ ವ್ಯರ್ಥವಾದುದನ್ನು ಮರೆತೇ ಬಿಡುತ್ತಾರೆ. ವೈಯುಕ್ತಿಕ ಪಿಸಿ ಅಥವಾ ಲಾಪ್ಟಾಪ್ ಇದ್ದರಂತೂ ಊಟ ನಿದ್ರೆ ಮರೆತು ಆನ್ಲೈನ್ ಸಂಭಾಷಣೆಯಲ್ಲಿ ತೊಡಗಿರುತ್ತಾರೆ.

ಇಲ್ಲವೆಂದಲ್ಲ... ಕೆಲವಾರು ಜೋಡಿಗಳು ಆನ್ಲೈನ್ನಲ್ಲಿ ಗೆಳೆಯರಾಗಿ ಮದುವೆಯಾಗಿ ಜೊತೆಯಾದದ್ದಿದೆ. ಆದರೆ ಅದು ನೂರರಲ್ಲಿ ಒಂದು ಮಾತ್ರ. ಇನ್ನುಳಿದವೆಲ್ಲಾ ಬರೀ ಮನರಂಜನೆಯ ಒಂದು ಭಾಗ ಅಷ್ಟೇ. ವಿದ್ಯಾರ್ಥಿಗಳೇ ಈ ಚಟಕ್ಕೆ ಆಕರ್ಷಣೆಗೆ ಹೆಚ್ಚು ಬಲಿಯಾಗುತ್ತಿರುವುದು ವಿಪರ್ಯಾಸ.

Wednesday, February 10, 2010

ಕನಸಿನಿಂದ ಭವಿಷ್ಯ ಕಟ್ಟಿ


ಕನಸುಗಳಿಗೇನು? ರಾತ್ರಿಯ ನಿಶ್ಚಿಂತ ನಿದ್ರೆಯನ್ನು ಹಾಳುಗೆಡಹುವ ಭೂತಗಳವು ಎನ್ನುತ್ತಿದ್ದಳು ಗೆಳತಿಯೊಬ್ಬಳು. ಆದರೆ ನನಗೆ ಅದೊಂದು ಪ್ರಿಯತಮನಂತೆ, ಗೆಳೆಯನಂತೆ, ತನು ಮನ ಎಲ್ಲವೂ ಅದೇ. ಕನಸು ಇಂದು ಕಂಡು ನಾಳೆ ಮರೆಯಾಗುವ ಮರೀಚಿಕೆಯಲ್ಲ. ಭಾವಗಳ ಸಮ್ಮಳಿತವೇ ಕನಸು.

ಪ್ರತಿಯೊಬ್ಬನೂ ತನ್ನ ಗುರಿಯನ್ನು ನಿರ್ಧರಿಸಿಕೊಳ್ಳುವುದು ಕನಸುಗಳಿಂದಲೇ... ಕನಸಿಲ್ಲದೆ ಧ್ಯೇಯ ಗುರಿಗಳಿಲ್ಲ. ಅಬ್ದುಲ್ ಕಲಾಂ ಹೇಳಿರುವಂತೆ ಮನುಷ್ಯನಾದವ ಜೀವನದಲ್ಲಿ ಒಮ್ಮೆಯಾದರೂ ಕನಸು ಕಾಣಲೇಬೇಕು. ಅದರ ಸಫಲತೆಯತ್ತ ದಾಪುಗಾಲಿಡಬೇಕು.

ಮನಶ್ಯಾಸ್ತ್ರದ ಹಿನ್ನೆಲೆಯಲ್ಲಿ ಹೇಳುವುದಾದರೆ ಕನಸುಗಳು ವ್ಯಕ್ತಿಯ ಒತ್ತಡವನ್ನು ಕಡಿಮೆಗೊಳಿಸುತ್ತವೆ ಅಲ್ಲದೆ ಸುಪ್ತಮನಸ್ಸಿನ ಬಯಕೆಗಳು ಕನಸಾಗಿ ಕಾಡಿ ಚಿಂತೆಯನ್ನು ದೂರಗೊಳಿಸುತ್ತದೆ. ಅದೇನೇ ಇರಲಿ, ಕನಸು ಗುರಿ ಇಲ್ಲದವನ ಬಾಳು ಹುಟ್ಟು ಇಲ್ಲದ ದೋಣಿಯಂತೆ, ಆದ್ದರಿಂದ ಕನಸು ಕಾಣಿ ಸುಂದರ ಬಾಳು ನಿಮ್ಮದಾಗಿಸಿಕೊಳ್ಳಿ.

Monday, February 8, 2010

ಮಾಧ್ಯಮದ ವಿದ್ಯಾರ್ಥಿಗಳೆಲ್ಲ ಎಲ್ಲಿ ಮಾಯವಾದರು?


ನಿಜವಾಗಿಯೂ ಚಿಂತಿಸಬೇಕಾದ ವಿಷಯವಿದು. ಹಿಂದೆ ಹೀಗಿರಲಿಲ್ಲ. ಇದ್ದ ನಾಲ್ಕಾರು ಕಾಲೇಜುಗಳ ಪತ್ರಿಕೋದ್ಯಮದ ವಿದ್ಯಾರ್ಥಿಗಳು ಸದಾ ಸುದ್ದಿಯಲ್ಲಿರುತ್ತಿದ್ದರು. ಅವರುಗಳು ಹೆಸರುಗಳು ಪತ್ರಿಕೆಯಲ್ಲಿ ಕಾಣಸಿಗುತ್ತಿದ್ದವು. ಬರೆಯಬೇಕು ಏನನ್ನಾದರೂ ಸಾಧಿಸಬೇಕೆಂಬ ತುಡಿತ ಮಿಡಿತಗಳು ಅವರಲ್ಲಿದ್ದವು. ಆದರೆ ಇಂದು ಹಾಗಿಲ್ಲ. ಪತ್ರಿಕೋದ್ಯಮ ವಿಭಾಗ ಕೇವಲ ಕೆಟ್ಟ ವಿಷಯಗಳಿಗಾಗಿ ಸುದ್ದಿಯಲ್ಲಿವೆ. ಪತ್ರಿಕೋದ್ಯಮ ವಿಭಾಗ ಬಹುತೇಕ ಉಲ್ಲಾ ಕಾಲೇಜುಗಳಲ್ಲೂ ಅಣಬೆಗಳಂತೆ ತಲೆಯೆತ್ತುತ್ತಿರುವುದೂ ಇದಕ್ಕೆ ಒಂದು ಕಾರಣ. ಸೂಕ್ತವಾಗಿ ಭೋದಿಸುವ ಅಧ್ಯಾಪಕರ ಕೊರತೆ ಈ ಕಾಲೇಜುಗಳನ್ನು ಬಹುವಾಗಿ ಕಾಡುತ್ತಿದೆ .ವಿದ್ಯಾರ್ಥಿಗಳನ್ನು ಬರವಣಿಗೆಯಲ್ಲಿ ಪ್ರೋತ್ಸಾಹಿಸುವ ಗುರುಗಳು ಕಡಿಮೆಯಾಗುತ್ತಿದ್ದಾರೆ...ಬರವಣಿಗೆ ಒಂದೇ ಪತ್ರಿಕೋದ್ಯಮ ಅಲ್ಲವಲ್ಲ ಅನ್ನುತ್ತಾರವರು.
ಆತಂಕಕಾರಿ ಬೆಳವಣಿಗೆ ಎಂದರೆ ಪತ್ರಿಕೋದ್ಯಮ ಇಂದು ಫ್ಯಾಶನ್ ಆಗಿದೆ. ಟಿವಿ ಮುಂದೆ ಮೈಕ್ ಹಿಡಿದು ಮಾತನಾಡಲು ಕನಿಷ್ಠ ಪತ್ರಿಕೋದ್ಯಮದಲ್ಲಿ ಪದವಿ ಆಗಿರಬೇಕೆಂಬ ಅರ್ಹತೆಯಷ್ಟೇ ಇವರ ಕಣ್ಣಿಗೆ ರಾಚುತ್ತಿದೆ. ಮಾಧ್ಯಮದ ಕಿಂಚಿತ್ತೂ ಜ್ಙಾನವಿಲ್ಲದ ಇವರು ನಾ ಮುಂದು ತಾ ಮುಂದು ಎಂದು ಪ್ರತಿಷ್ಠಿತ ಕಾಲೇಜುಗಳೆಡೆಗೆ ದೌಡಾಯಿಸುತ್ತಿದ್ದಾರೆ.ಆದರೆ ಅದಕ್ಕನುಗುಣವಾಗಿ ತರಗತಿಗಳಲ್ಲಿ ಭೋದಿಸುವ ಅಧ್ಯಾಪಕರುಗಳ ಸಂಖ್ಯೆ ಹೆಚ್ಚಿಲ್ಲ. ಇರುವ ಅಧ್ಯಾಪಕರುಗಳೂ ಹಳೇ ಕಾಲದ ಪುಸ್ತಕ ಹಿಡಿದು
pen is stronger than sword
ಎಂದೇ ಹೇಳಿಕೊಡುತ್ತಾರೆ. ಅವರಿಗೂ ಆಧುನಿಕ ತಂತ್ರಜ್ಞಾನದ ಅರಿವಿದ್ದವಿದ್ದಂತೆ ಕಾಣುವುದಿಲ್ಲ.
8-10 ವರ್ಷಗಳ ಹಿಂದೆ ತಯಾರಿಸಿದ ನೋಟ್ಸನ್ನು ಕ್ಲಾಸಿಗೆ ತಂದು ಅದನ್ನೇ ಪಾಠ ಮಾಡುತ್ತಾರೆ ಇಲ್ಲವೇ ಡಿಕ್ಟೇಟ್ ಮಾಡುತ್ತಾರೆ. ಅವರು ಕೊಡುವ ಉದಾಹರಣೆಗಳಲ್ಲಿ ಭೋಪಾಲ್ ಗ್ಯಾಸ್ ಟ್ರಾಜ್ಡಿ ಇರುತ್ತದೇ ಹೊರತು ಮುಂಬೈ ಟೆರರ್ ಅಟಾಕ್ ನ ತುಣುಕೂ ಇರುವುದಿಲ್ಲ. ಇದು ಕಾಲೇಜುಗಳಲ್ಲಿ ಮಾತ್ರವಲ್ಲ ಹೆಚ್ಚಿನ ಯುನಿವರ್ಸಿಟಿಗಳ ಕತೆಯೂ ಹೌದು. ಇನ್ನು ವಿದ್ಯಾರ್ಥಿಗಳಲ್ಲೇ ಕೆಲವರು ಮುಂದೆ ಬಂದು ಸ್ವ ಆಸಕ್ತಿಯಂದ ಕತೆ ಕವನ ಲೇಖನ ಗೀಚಿದರಷ್ಟೇ ಉಂಟು. ಅದೆಷ್ಟೋ ವಿದ್ಯಾರ್ಥಿಗಳು ಒಂದೂ ಬೈಲೈನ್ ಇಲ್ಲದೆ ತನ್ನ 2 ವರ್ಷದ ಪೋಸ್ಟಗ್ರಾಜ್ಯುಯೇಟ್ ಸ್ಟಡಿಯನ್ನು ಮುಗಿಸಿರುತ್ತಾನೆ. ಬರವಣಿಗೆಯ ರುಚಿ ಗೊತ್ತಿರದವ ಮುಂದೆ ಎಷ್ಟು ದೊಡ್ಡ ಪತ್ರಕರ್ತನಾಗಬಲ್ಲ...?
ಇಂದು ಪ್ರಕಟವಾಗುತ್ತಿರುವ ವಿದ್ಯಾರ್ತಿ ಅಂಕಣಗಳನ್ನೇ ಗಮನಿಸಿ. ಅದರಲ್ಲಿರುವುದೆಲ್ಲಾ ಪ್ರೇಮಪತ್ರಗಳು, ನಿವೇದನೆಗಳು ನೆನಪಿನ ಬುತ್ತಿಗಳು ಇಷ್ಟೇ. ಪ್ರಸಕ್ತ ವಿದ್ಯಮಾನಗಳು, ಆಗುಹೋಗುಗಳ ಬಗ್ಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಿ ಬರೆದ ಬರಹಗಳಾವುವೂ ಕಾಣಸಿಗುವುದಿಲ್ಲ. ವಿದ್ಯಾರ್ತಿಗಳ ಬ್ಲಾಗ್ಗಳಿಗೆ ಭೇಟಿಯಿತ್ತರೆ ಅಲ್ಲಿರುವುದೂ ಅಷ್ಟೇ.
ಇನ್ನು ತರಗತಿಗಳ ವಿಷಯಕ್ಕೆ ಬಂದರೆ ಪತ್ರಿಕೋದ್ಯಮ ವಿದ್ಯಾರ್ತಿಗಳು ಕಲಿಯಬೇಕಾದುದು 4 ಗೋಡೆಗಳ ಮಧ್ಯದ ತರಗತಿಗಳಲಲ್ಲ. ಆತ ಸಾಧ್ಯವಾದಷ್ಟು ಹೊರಜಗತ್ತನ್ನು ನೋಡಬೇಕು, ಕೈಯಲ್ಲಿ ಕ್ಯಾಮರಾ ಹಿಡಿದು ಊರೂರು ಸುತ್ತಬೇಕು ಎಂದು ಬಹುತೇಕ ಎಲ್ಲ ಮಾಧ್ಯಮದ ಕಾರ್ಯಗಾರಗಳಲ್ಲಿ ಹೇಳಲಾಗುತ್ತದೆ. ಆದರೆ ಈ ವ್ಯವಸ್ಥೆ ಎಲ್ಲಿದೆ? ಯಾವ ಕಾಲೇಜಿನಲ್ಲಿ ಎಜುಕೇಶನಲ್ ಟೂರ್ ಗಳನ್ನು ಅಥವಾ ಮೀಡಿಯಾ ವಿಸಿಟ್ ಮಾಡಲಾಗುತ್ತಿದೆ? ರೇಡಿಯೋದ ಸ್ಟುಡಿಯೋ ಸೆಟ್ಅಪ್ ಅನ್ನು ತರಗತಿಗಳಲ್ಲಿ ಭೋದಿಸುವುದಕ್ಕಿಂತ ಒಮ್ಮೆ ಅಲ್ಲಿಗೆ ಬೇಟಿ ನೀಡಿ ಅಲ್ಲಿನ ವಿಧಿ ವಿಧಾನಗಳನ್ನ ಸಾಕ್ಷಾತ್ಕರಿಸಿ ಹೇಳುವುದಕ್ಕೂ ವ್ಯತ್ಯಾಸವಿದೆಯಲ್ಲವೇ?
ಇನ್ನು ವಿಶ್ವವಿದ್ಯಾಲಯಗಳ ಸ್ಟುಡಿಯೋಗಳಂತೂ ಕೊಳೆತು ನಾರುವ ಸ್ಥಿತಿಗೆ ಬಂದಿದೆ. ವಿವಿಗಳಲ್ಲಿ ಲಕ್ಷಗಟ್ಟಲೆ ಬೆಲೆಬಾಳುವ ಕ್ಯಾಮರಾಗಳಿವೆ, ಬೃಹತ್ ಸ್ಟುಡಿಯೋಗಳಿವೆ. ಆದರೆ ಬಳಕೆಯನ್ನು ಮಕ್ಕಳಿಗೆ ಹೇಳಿಕೊಡುವ ಟೆಕ್ನೀಶಿಯನ್ ಗಳಿಲ್ಲ. ಅಲ್ಲದೆ ಸುಮಾರು 200 ರೂ ಮೌಲ್ಯದ ಒಂದು ಸಣ್ಣ ಭಾಗವು ಹಾಳಾದರೂ, ಮುಂದೆ ಬಂದು ಸರಿ ಮಾಡಿಸುವವರಿಲ್ಲ.ಚಿಕ್ಕ ಪುಟ್ಟ ದೋಷಗಳಿಂದಾಗಿ ಇವುಗಳು ಇಂದು ಮೂಲೆಗುಂಪಾಗಿವೆ.
ಇತ್ತೀಚೆಗೆ ನಡೆದ ರಾಜ್ಯಮಟ್ಟದ ಕಾರ್ಯಗಾರವೊಂದರಲ್ಲಿ ಖ್ಯಾತ ಪತ್ರಿಕೆಯ ಸಂಪಾದಕರೊಬ್ಬರು ವಿದ್ಯಾಥರ್ಿಗಳ ಕುರಿತಾಗಿ ಕೇಳಿದ 2 ಪ್ರಶ್ನೆಯಂದರೆ 'ಎಷ್ಟು ಜನ ತಪ್ಪದೆ ದಿನಪತ್ರಿಕೆ ಓದುತ್ತೀರಿ?''ಎಷ್ಟು ಜನ ಪತ್ರಿಕೆಗೆ ಬರೆಯುತ್ತೀರಿ?' ಸುಮಾರು 75ಕ್ಕೂ ಮಿಕ್ಕಿ ವಿದ್ಯಾಥರ್ಿಗಳಿದ್ದ ಆ ಸಭೆಯಲ್ಲಿ ಎತ್ತಿದ ಕೈಗಳು ಬೆರಳೆಣಿಕೆಯಷ್ಟು ಮಾತ್ರ... ಇದೊಂದೇ ಸಾಕಲ್ಲ ಇಂದಿನ ಪತ್ರಿಕೋದ್ಯಮ ವಿಭಾಗ ಹಾಗೂ ವಿದ್ಯಾಥರ್ಿಗಳ ಹಣೆಬರಹ ಅಳೆಯಲು...

Thursday, February 4, 2010

ಪ್ರೇಮಿಗಳಿಗೊಂದು ದಿನವಿರಲಿ


ಪ್ರೇಮಿಗಳ ದಿನದಂದು ಹುಡುಗ ಹುಡುಗಿ ಜೊತೆಯಾಗಿ ಹೊರಗಡೆ ಕಾಣಿಸಿಕೊಂಡರೆ ತಾಳಿ ಕಟ್ಟಿಸುವಾಗಿ ಧಮಕಿ ಹಾಕಲು ಇಷ್ಟಕ್ಕೂ ಇವರ್ಯಾರು ವಿದೇಶೀ ಸಂಸ್ಕೃತಿಯನ್ನು ನಾವು ಈ ವರೆಗೆ ಆಚರಿಸಿಕೊಂಡಿದ್ದೇ ಇಲ್ಲವೇ?
ಯುಗಾದಿಯ ಬದಲಾಗಿ ಜನವರಿ 1 ನ್ನು ಹೊಸವರ್ಷವಾಗಿ, ಫ್ರೆಂಡ್ಶಿಪ್ಡೇ, ರಾಕಿ ಡೇ, ತಂದೆಯರ ದಿನ, ತಾಯಿಯರ ದಿನ ಎಂದು ನೊರೆಂಟು ಆಚರಣೆಗಳನ್ನು ನಮ್ಮದೆಂದು ಸ್ವೀಕರಿಸಿ ಆಚರಿಸುತ್ತಿರುವಾಗ ಪ್ರೇಮಿಗಳ ದಿನಾಚರಣೆಗೆ ಮಾತ್ರ ಯಾಕಿಷ್ಟು ಅಡಚಣೆ?
ಸಾರ್ವಜನಿಕ ಪ್ರದೇಶಗಳಲ್ಲಿ ಅಸಹ್ಯಕರವಾಗಿ ನಡೆದುಕೊಳ್ಳದೆ ಪ್ರೇಮಿಗಳ ದಿನವನ್ನು ಆಚರಿಸಿ ಎಂದು ಕರೆ ನೀಡಿದ್ದರೆ ಅದಕ್ಕೊಂದು ಅರ್ಥವಿರುತ್ತಿತ್ತು. ಹಾಗೆ ನೋಡಿದರೆ ಪ್ರೇಮಿಗಳಿಗೆ ಪ್ರತಿದಿನವೂ ಹಬ್ಬವೇ, ಒಂದು ದಿನ ಅವರಿಗಾಗಿ ಮೀಸಲಿಟ್ಟರೆ ತಪ್ಪೇನು?
ಗಣಪತಿಯನ್ನು ಪ್ರತಿದಿನವೂ ಪೂಜಿಸಬಹುದು. ಆದರೆ ಗಣೇಶ ಚತುಥರ್ಿಯಂದು ಯಾಕೆ ವಿಷೇಶವಾಗಿ ಪೂಜಿಸುತ್ತೇವೆ. ಹಾಗೆ ವಿನಾಕಾರಣ ಯಾರದೋ ತಪ್ಪಿಗೆ ಯಾರನ್ನೋ ಹೊಣೆಯಾಗಿಸುವುದು ಬೇಡ. ಪ್ರೇಮಿಗಳನ್ನು ಅವರ ಪಾಡಿಗೆ ಬಿಟ್ಟುಬಿಡಿ. ಏಕೆಂದರೆ ನೀವು ಒಮ್ಮೆಯಾದರೂ ಜೀವನದಲ್ಲಿ ಪ್ರೇಮಿಯಾಗಿರುತ್ತೀರಿ ಇಲ್ಲವಾದರೆ ಮುಂದೆಂದಾದರೂ ಪ್ರೇಮಿಯಾಗುತ್ತೀರಿ....

Tuesday, February 2, 2010


ಶಕ್ತಿ ಕೊಡು ದೇವರೇ...
ಅದೇಕೋ ಮುಖವಾಡಗಳೊಂದಿಗೆ ಬದುಕುವುದು ಅಭ್ಯಾಸವಾಗಿಬಿಟ್ಟಿದೆ. ನನ್ನ ಕಾಡುವ ನಿನ್ನ ನೆನಪುಗಳೇ ಜತೆಗಾತಿಯಾರುವಾಗ ಯಾರಿಂದೇನು ಮಾಡಲು ಸಾಧ್ಯ. ಅದೆಷ್ಟೋ ರೀತಿಗಳಲ್ಲಿ ಪ್ರಯತ್ನಿಸಿ ಸೋತಿದ್ದೇನೆ ಗೆಳೆಯಾ... ನೀ ನೆನಪಾಗಬಾರದೆಂದು... ಅದೆಷ್ಟೋ ರಾತ್ರಿಗಳಲ್ಲಿ ಪುಸ್ತಕವನ್ನು ತಡಕಾಡುತ್ತಾ ಕಳೆದಿದ್ದೇನೆ. ಆದರೆ ಪ್ರತಿ ಪುಟದ ಕೊನೆಯ ಅಕ್ಷರವಾಗಿ ನೀನೇ ಮತ್ತೆ ಕಾಡಿದರೆ...ನನಗೆ ಬೇರೆ ಮಾರ್ಗವಾದರೂ ಏನಿತ್ತು ಹೇಳು.
ಅಂದು ಎಲ್ಲರ ಮಾತು ಧಿಕ್ಕರಿಸಿ ನಿನ್ನಜೊತೆ ಹೊರಟು ನಿಂತಾಗಲೇ ತಪ್ಪಿನ ಅರಿವಾಗಬೇಕಿತ್ತು. ದುದರ್ೈವವಶಾರ್ ಅಂದು ನಾನು ನಿನ್ನ ಪ್ರೀತಿಯ ಕುರುಡಿಯಾಗಿದ್ದೆ. ಅಪ್ಪ, ಅಮ್ಮ ಸಂಬಂಧಿಕರು ಯಕಶ್ಚಿತ್ ಆಗಿ ಕಂಡಿದ್ದರು...ನೀನೇ ಎಲ್ಲಾ ನೀನಿಲ್ಲದೆ ನನಗೇನಿಲ್ಲ ಎಂಬ ನಿನ್ನ ಮಾತೇ ವೇದ ವಾಕ್ಯವಾಗಿತ್ತು. ಆದರೆ ಎಷ್ಟು ದಿನ... ತಿಂಗಳೊಂದರ ಒಳಗೆ ನಿನ್ನ ಆಂತರಿಕ ಮುಖದ ದರ್ಶನವಾಯ್ತಲ್ಲ. ಆ ದಿನ ಮುಂಜಾನೆ ನೀನಾಡಿದ ಮಾತು ಎಲ್ಲೋ ಅವಿತು ಕುಳಿತಿದ್ದ ನನ್ನ ಸ್ವಾಭಿಮಾನದ ಕಿಚ್ಚನ್ನು ಬಡಿದೆಬ್ಬಿಸಿತ್ತು. ದೂರವಾಗಲು ನನ್ನ ಮನವೂ ಹಾತೊರೆಯುತ್ತಿತ್ತೇನೋ ಗೆಳೆಯಾ... ನಿನ್ನ ಒಂದು ಮಾತೇ ಸಾಕಾಯ್ತು ನೋಡು ಬರಿಗೈಲೇ ಹೊರಟು ಬಿಡೋಕೆ...
ಹೆತ್ತವರನ್ನು ಬಿಟ್ಟು ಬಂದ ನನ್ನ ಮೇಲೆ ಕನಿಷ್ಠ ಪಕ್ಷ ಕನಿಕರವಾದರೂ ಉಳಿದಿರಬಹುದೆಂದು ನಿರೀಕ್ಷಿಸಿದ್ದೆ ನೋಡು ಅದು ನನ್ನ ತಪ್ಪು. ನಿನಗೆ ನಾನು ಬೇಕಿರಲಿಲ್ಲ...ನನ್ನ ಪ್ರೀತಿಯೂ ಬೇಕಿರಲಿಲ್ಲ ಎಂದುಕೊಂಡರೆ ಸಾಕು ಮೈ ಎಲ್ಲಾ ಇಂದಿಗೂ ಉರಿಯಾಗುತ್ತದೆ...ನಿನ್ನ ನಾಟಕೀಯ ಪ್ರೀತಿಯ ಮಾತುಗಳನ್ನು ಎನಿಸಿಕೊಂಡರೆ ಅಸಹ್ಯವಾಗುತ್ತದೆ...ಆದರೇನು ಮಾಡಲಿ ಎಷ್ಟೇ ಪ್ರಯತ್ನಿಸಿದರೂ ಇದಾವುದನ್ನು ಮರೆಯಲಾಗುತ್ತಿಲ್ಲ... ಪದೇ ಪದೇ ನೆನಪಾಗುತ್ತೀಯ ಆದರೆ ನಿನಗೆ.....???
ಅಂದಿನಿಂದ ಇಂದಿನವರೆಗೆ ಒಂದು ಹುಡುಗನನ್ನು ಕಣ್ಣೆತ್ತಿ ನೋಡಲು ಸಾಧ್ಯವಾಗಿಲ್ಲ. ಕಂಡರೂ ಅವರು ನಿನ್ನಂತೆಯೇ ಎಂದೆಣಿಸಿ ಹೇವರಿಕೆ ಉಂಟಾಗುತ್ತದೆ...ತಪ್ಪನ್ನೆಲ್ಲಾ ನಿನ್ನ ಮೇಲೆ ಹೊರಿಸಿ ಗೂಬೆ ಕೂರಿಸುತ್ತೀನಿ ಅಂದುಕೊಳ್ಳಬೇಡ. ನನಗೆ ದಕ್ಕಿದ್ದಿಷ್ಟು ಅಂತ ಬದುಕುವುದನ್ನು ಕಲಿತಿದ್ದೇನೆ. ಪ್ರತಿದಿನ ದೇವರಲ್ಲಿ ಕೇಳುವುದಿಷ್ಟೇ ಮತ್ತೆ ಅವನು ನನ್ನೆದುರು ಬಂದರೆ ಧಿಕ್ಕರಿಸಿ ನಿಲ್ಲುವ ಶಕ್ತಿಕೊಡು ದೇವರೇ....

Monday, February 1, 2010


ನೆನಪೇ ನೆನಪಾಗಿ ಕಾಡಿದಾಗ...
ಈ ನೆನಪುಗಳೇ ಹೀಗೆ... ಮಗುವಿನಂತೆ ಮುಗ್ಧ ನಗುವಿನಂತೆ ಬೇಡವೆಂದರೂ ಕಾಡುವುದು... ಹಲವೊಮ್ಮೆ ಸಂಗಾತಿಯಂತೆ ಸಾಂತ್ವನ ಹೇಳುವುದು. ಇನ್ನೊಮ್ಮೆ ನೆಮ್ಮದಿಯ ನಿಟ್ಟುಸಿರು ಬಿಡುವುದು... ಹಲವು ಬಾರಿ ಜಡಿಮಳೆಯಾಗಿ ಕಾಡಿದರೆ, ಇನ್ನು ಕೆಲವೊಮ್ಮೆ ಸುಡುಬಿಸಿಲಿನಂತೆ...
ಕೈ ಹಿಡಿದ ಪ್ರೇಮಿಯಂತೆ ಮುನ್ನಡೆಸಿಕೊಂಡು ಹೋದರೆ ಇನ್ನು ಕೆಲವೊಮ್ಮೆ ಗತಿಸಿದ ತಾತನ ನೆನಪಿನಂತೆ. ದು:ಖದ ಮಡುವಿನಿಂದ ಮೇಲೆತ್ತುವ ಗೆಳತಿಯಂತೆ, ಕಾಲೆಳೆಯುವ ತಮ್ಮನಂತೆ, ಗೋಗರೆದು ಕಾಡುವ ತಂಗಿಯಂತೆ, ಯಾಕೋ ಈ ನೆನಪುಗಳೇ ನೆಪವಾಗಿ ತೀವ್ರವಾಗಿ ಕಾಡುತ್ತವೆ.
ನೆನಪುಗಳಿಲ್ಲದ ಜೀವನ ಊಹಿಸಲೂ ಅಸಾಧ್ಯ. ನೆನ್ನೆಯ ನೆನಪುಗಳೇ ನಾಳಿನ ಭವಿಷ್ಯದ ಭದ್ರ ಬುನಾದಿಯಾಗುತ್ತದೆ. ಸಿಹಿನೆನಪು ಸೂಕ್ತ ಪಥವನ್ನೇ ತೋರುತ್ತದೆ. ಇನ್ನು ಬಾಲ್ಯದ ನೆನಪುಗಳಂತೂ ಸದಾ ಸಿಹಿ.

ಸವಿ ಸವಿ ನೆನಪು
ಸಾವಿರ ನೆನಪು
ಸಾವಿರ ಕಾಲಕು
ಸವೆಯದ ನೆನಪು...
ನೊಂದ ಮನಕೆ ತಂಪನ್ನೀಯವ ಟಾನಿಕ್ಗಳೇ ಈ ನೆನಪುಗಳು. ಅದೆಷ್ಟೋ ಬಾರಿ ಈ ನೆನಪುಗಳ ಮೂಲಕ ನಾವು ಬಾಲಕರಾಗುವುದುಂಟು. ಏಕಾಂತದ ಸಮಯದಲ್ಲಿ ನಮ್ಮ ಜೊತೆಯಾಗಿರುವುದು ಅದೇ ನೆನಪುಗಳು ತಾನೇ... ಓ ನೆನಪಿನ ಹುಡುಗ ದಯವಿಟ್ಟು ಮತ್ತೆ ನನ್ನ ಕಾಡಬೇಡ...ನಾ ಒಂಟಿಯಾಗಿರುವಾಗ...

ಇಬ್ಬನಿ

ಮುಂಜಾನೆಯ ರವಿಯು

ಹಸಿರು ತರುಲತೆಗೆ

ಮುತ್ತಿಟ್ಟ ಕ್ಷಣದಲ್ಲಿ

ಮೂಡಿದ ಸಂಭ್ರಮದ

ಕಂಬನಿ-ಇಬ್ಬನಿ...

ಹೀಗಿರಲಿ ಬರವಣಿಗೆ....


ಗೆಳೆಯನೊಬ್ಬ ನನ್ನ ಬರಹ ಹಲವು ಬಾರಿ ಪ್ರಯತ್ನಿಸಿದರೂ ಪತ್ರಿಕೆಯಲ್ಲಿ ಪ್ರಕಟವಾಗಲಿಲ್ಲ ಎಂದು ಅವಲತ್ತುಕೊಂಡ. ನಾನೂ ಬಹಳ ಯೋಚಿಸಿ ನೀನು ಮೊದಲ ಬಾರಿ ಬರೆದ ಅನುಭವವನ್ನೇ ರೋಮಾಂಚಕವಾಗಿ ರಸವತ್ತಾಗಿ ಬರೆ ಎಂದು ಕಿವಿಮಾತು ಹೇಳಿದೆ. ಆತ ಅದನ್ನೇ, ಬರೆದೆ... ಹರಿದೆ... ಮತ್ತೆ ಬರೆದೆ...ಎಂದು ಆರಂಭಿಸಿ ನಾಟಕೀಯವಾಗಿ ಬರಿದಿದ್ದ. ಮುಂದಿನ ವಾರವೇ ಅದು ರಾಜ್ಯ ಮಟ್ಟದ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು.
ಮೊದಲ ಬಾರಿ ತನ್ನ ಹೆಸರು ಪತ್ರಿಕೆಯಲ್ಲಿ ಪ್ರಕಟವಾದಾಗ ದೊರೆಯುವ ಸಂತಸವಿದೆಯಲ್ಲಾ ಅಬ್ಬಾ ಅದನ್ನು
ಅಕ್ಷರಗಳಲ್ಲಿ ಹೇಳಲು ಸಾಧ್ಯವಿಲ್ಲ. ಗುರುತು ಪರಿಚಯವಿರುವವರಿಗೆಲ್ಲಾ ಫೋನಾಯಿಸಿ ಮೆಸೇಜುಗಳ ಮುಖಾಂತರ ತಿಳಿಸಿ ಬೀಗುವ ಪರಿ ನೋಡಬೇಕು.ಒಮ್ಮೆ ಬರವಣಿಗೆಯ ಹಿಡಿತ ದೊರಕಿತೆಂದರೆ ಮತ್ತೆ ಆತ ಹಿಂದಿರುಗಿ ನೋಡಲಾರ.
ಬರವಣಿಗೆ ಎಂಬುದು ವ್ಯಕ್ತಿತ್ವವನ್ನು ಬೆಳೆಸುತ್ತದೆ. ಕೆಲವರಿಗೆ ಮನಸ್ಸಲ್ಲಿ ತೋಚಿದ್ದೆಲ್ಲಾ ಗೀಚುವ ಹವ್ಯಾಸವಾದರೆ ಇನ್ನು ಕೆಲವರಿಗೆ ಅದೊಂದು ವೃತ್ತಿಪರತೆ. ಅದರಲ್ಲೂ ಮುಖ್ಯವಾಗಿ ಪತ್ರಿಕೋದ್ಯಮ ವಿದ್ಯಾಥರ್ಿಗಳಿಗೆ ಬರವಣಿಗೆ ಜೀವನಾಡಿ ಇದ್ದಂತೆ. ಯಾವುದೇ ವಿಷಯದ ಬಗ್ಗೆ ಪುಟಗಟ್ಟಲೆ ಬರೆಯುವ ಸಾಮಥ್ರ್ಯ ಅವರಿಗಿರಬೇಕು. ಮಾರುಕಟ್ಟೆಗೆ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಕೇಳುವ ಮೊದಲ ಪ್ರಶ್ನೆಯೇ 'ಎಷ್ಟು ಬೈಲೈನ್ ಬಂದಿದೆ?'
ಉತ್ತಮ ಬರವಣಿಗೆಗೆ ಇರಲೇ ಬೇಕಾದ ಕೆಲವು ಅಂಶಗಳೆಂದರೆ ಸ್ಪಷ್ಟತೆ ಹಾಗು ನಿಖರತೆ. ಚಿಕ್ಕದಾಗಿ ಚೊಕ್ಕದಾಗಿ ಬರೆದಷ್ಟೂ ಅದರ ಮೌಲ್ಯ ಹೆಚ್ಚುತ್ತದೆ. ಆಕರ್ಷಕ ಆರಂಭ-ಅಂತ್ಯಗಳೆರಡೂ ಬಹಳ ಮುಖ್ಯ. ಜೊತೆಗೆ ಹಲವು ಬಾರಿ ಹಣೆಬರಹಗಳು ಬರಹದ ತಲೆಬರಹವನ್ನು ನಿರ್ಧರಿಸುತ್ತದೆ. ಉತ್ತಮ ವಿಷಯದ ಆಯ್ಕೆಯೂ ಬಹಳ ಮುಖ್ಯ. ಕಾಲಕ್ಕನುಗುಣವಾಗಿ( ದೀಪಾವಳಿ ಸಮಯದಲ್ಲಿ ಹಬ್ಬ ಆಚರಣೆಗಳ ಕುರಿತು) ಬರೆಯುವುದನ್ನು ಕಲಿತಿರಬೇಕು. ಧೋ ಎಂದು ಸುರಿಯುತ್ತಿರುವ ಮಳೆಗಾಲದಲ್ಲಿ ಬೇಸಿಗೆಕಾಲದ ಉಡುಪುಗಳ ಬಗ್ಗೆ ಬರೆದರೆ ಅದು ನಿರ್ಲಕ್ಷ್ಯಗೊಳ್ಳುವ ಸಾಧ್ಯತೆಗಳೇ ಹೆಚ್ಚು.
ಆರಂಭದಲ್ಲೇ ತಿಂಗಳಲ್ಲಿ ಬರುವ ಜಾತ್ರೆ ಹಬ್ಬ ವಿಶೇಷ ದಿನಗಳನ್ನು ಪಟ್ಟಿಮಾಡಿಟ್ಟುಕೊಂಡು ಅದಕ್ಕನುಗುಣವಾಗಿ ಬರೆಯುವುದು ಜಾಣತನ. ಅಲ್ಲದೆ ಬರೆಯುವ ಮೊದಲೇ ಪ್ರಕಟಿಸುವ ಮಾಧ್ಯಮದ ಕುರಿತಾಗಿ ತಿಳಿದುಕೊಂಡಿರಬೇಕು. ಯಾವ ಪತ್ರಿಕೆ, ನಿಯತಕಾಲಿಕೆ, ಯಾವ ಶೈಲಿಯ ಬರಹಗಳನ್ನು ಆಹ್ವಾನಿಸುತ್ತದೆ, ಸ್ವೀಕರಿಸುತ್ತದೆ ಎಂಬುದರ ಅರಿವಿರಬೇಕು. ಬರಹವನ್ನು ಗುರುಗಳಿಂದ ಗೆಳೆಯರಿಂದ ತಿದ್ದಿಸಿಕೊಳ್ಳುವುದು ಇನ್ನೂ ಉತ್ತಮ.
ಬರವಣಿಗೆ ನಮ್ಮನ್ನು ನಾಲ್ಕು ಜನರಿಗೆ ಪರಿಚಯಿಸುತ್ತದೆ ಅಲ್ಲದೆ ಸಣ್ಣ ಮಟ್ಟದ ಪಾಕೆಟ್ ಮನಿಯನ್ನೂ ಒದಗಿಸುತ್ತದೆ. ಇಷ್ಟೆಲ್ಲಾ ಲಾಭವಿದೆ ಎಂದ ಮೇಲೂ ಸುಮ್ಮನೆ ಕುಳಿತಿರೇಕೆ? ಇಂದೇ ಆರಂಭಿಸಿ ಯಾರಿಗೊತ್ತು ನಿಮ್ಮೊಳಗೂ ಒಬ್ಬ ಎಂ.ವಿ ಕಾಮತ್, ಖುಷ್ವಂತ್ ಸಿಂಗ್ ಅಡಗಿ ಕುಳಿತಿರಬಹುದಲ್ಲಾ...?

ಗುಪ್ತ ಗಾಮಿನಿ ಹಾದಿ ಅಂತ್ಯ...


ಅಂತೂ ಗುಪ್ತಗಾಮಿನಿ ತನ್ನ 6 ವರ್ಷಗಳ ಸುದೀರ್ಘ ಪಯಣಕ್ಕೆ ಅಂತ್ಯ ಹಾಡಿದೆ. ಭಾವನಾ, ಸಾಗರ್, ಸಾಕ್ಷಿ, ಅಜ್ಜಿ, ಶಂಕರ್, ಕಶಿಶ್, ಇನ್ನು 6.30 ಕ್ಕೆ ನೇರವಾಗಿ ನಿಮ್ಮ ಮನೆಗೆ ಅಡಿಯಿಡುವುದಿಲ್ಲ. ಹೌದು...ಧಾರವಾಹಿಗಳ ಪಾತ್ರಧಾರಿಗಳನ್ನು ಅದೇ ಹೆಸರಿನಿಂದ ಕರೆಯುವಷ್ಟರ ಮಟ್ಟಿಗೆ ಆಪ್ತವಾಗಿತ್ತು ಈ ಗುಪ್ತಗಾಮಿನಿ ಎಂಬ ಧಾರವಾಹಿ. ನಿರ್ದೇಶಕಿ ಸಂಧ್ಯಾ. ಪೈ ಎಂದೋ ಈ ಕಥೆಯನ್ನು ಮುಗಿಸಿಬಿಡಬಹುದಿತ್ತು. ಅತಿರಥ ಮಹಾರಥರಾದ ಪವಿತ್ರಾ ಲೋಕೇಶ್, ಅಶೋಕ್,ರಾಜೇಶರನ್ನು ಕಳೆದುಕೊಂಡು ನಿರ್ಜಿವ ಸ್ಥಿತಿಯಲ್ಲಿದ್ದ ಧಾರವಾಹಿಗೆ ಜೀವತುಂಬಿ ಮತ್ತೆ 2 ವರ್ಷ ಓಡುವಂತೆ ಮಾಡಿದ ಕೀರ್ತಿ ಈ ನಿರ್ದೇಶಕಿಗೆ ಸಲ್ಲಬೇಕು. ಭಾವನಾ (ಸುಷ್ಮಾ ರಾವ್), ಅಜ್ಜಿ (ಸುಂದರಶ್ರೀ) ಗಾಯತ್ರಿ, ( ಜ್ಯೋತಿ ರೈ) ಸಾಗರ್, ಸಾಕ್ಷಿ ಪಾತ್ರಗಳು ಬದಲಾಗದೆ ಮೂಲನಟಿಯರಿಂದಲೇ ಅಭಿನಯಿಸಲ್ಪಟ್ಟಿದ್ದು ವಿಷೇಶ. ಸಂಜೆ 6.30 ಕ್ಕೆ ಎಲ್ಲಾ ಕೆಲಸ ಮುಗಿಸಿ ಟಿವಿ ಮುಂದೆ ಹಾಜರಾಗುತ್ತಿದ್ದ ಮಂದಿಗೆ ಗುಪ್ತಗಾಮಿನಿ ದಿಢೀರ್ ನೆ ಮುಕ್ತಾಯ ಕಂಡಿದ್ದು ಅರಗಿಸಿಕೊಳ್ಳಲು ಸ್ವಲ್ಪ ಕಷ್ಟವೇ... ತನ್ನ ವಿಶಿಷ್ಟ ಪ್ರಕಾರ ಅಭಿವ್ಯಕ್ತಿಗಳಿಂದಾಗಿ ಮನೆಮಾತಾಗಿದ್ದ ಧಾರವಾಹಿಯನ್ನ ವೀಕ್ಷಕರು ಮಿಸ್ ಮಾಡಿಕೊಳ್ತಿರೋದಂತೂ ನಿಜ...

Friday, January 29, 2010


'ಪ್ರೀತಿ'


ನಾನೊಂದು ತೀರ ನೀನೊಂದು ತೀರ
ಮನಸು ಮನಸು ದೂರ
ಪ್ರೀತಿ ಹೃದಯ ಭಾರ...


ಇದಕ್ಕೆ ನೀನೇ ಹೊಣೆ ಎಂದು ನಾ ದೂಷಿಸುತ್ತಿಲ್ಲ. ನಾವಿಬ್ಬರೂ ಹೊಣೆಗಾರರು. ನಮ್ಮ ಸ್ನೇಹ ಪ್ರೀತಿಯ ಕಡೆ ವಾಲುತ್ತಿದ್ದ ಅರಿವಿದ್ದರೂ ಸುಮ್ಮನಿದ್ದೆವು. ಅಲ್ಲೇ


ತಪ್ಪಾಯಿತು ನೋಡು. ಈಗ ಪ್ರಾಯಶ್ಚಿತ್ತವನ್ನು ಅನುಭವಿಸುತ್ತಿದ್ದೇವೆ.

'ಪ್ರೀತಿ'ಯ ವಿಷಯದಲ್ಲಿ ನಮ್ಮಿಬ್ಬರ ಮಧ್ಯೆ ಅಜಗಜಾಂತರ ವ್ಯತ್ಯಾಸವಿದ್ದರೂ ಯಾಕೆ ಹೀಗಾಯಿತು? ಪ್ರತಿಬಾರಿ ನಾವು ವಿಶ್ಲೇಷಿಸುತ್ತಿದ್ದ ಪ್ರೀತಿಯ ಸಂಕೊಲೆ


ಯಾಕೆ ನಮ್ಮಿಬ್ವರನ್ನೇ ಸುತ್ತಿಕೊಂಡಿತು? ನನ್ನ ಕಲ್ಪನೆಗಳಿಗಿಂತ ಮಿಗಿಲಾದ ನಿನ್ನ ಪ್ರೀತಿ ಕೆಲವು ಕ್ಷಣ ನನ್ನ ಮನಸ್ಸನ್ನು ಕೆಡಿಸಿದ್ದು ಸುಳ್ಳಲ್ಲ ಗೆಳೆಯಾ... ಆದರೆ


ಪ್ರೀತಿ ಆಕಸ್ಮಿಕವಾಗಬಾರದಲ್ಲ... ಅದು ಬರೀ ಗೆಳೆತನದ ಚೌಕಟ್ಟಿಗೆ ಮೀಸಲಾಗಬಾರದಲ್ಲ... ಅನ್ನುವ ಕಾರಣಕ್ಕೆ ನಾ ದೂರವಾದೆ... ಪ್ರೀತಿಯ ಬಗ್ಗೆ


ಅಪಾರ ಗೌರವದ ಅರಿವಿದೆ ನನಗೆ... ಆದರೆ ಅದನ್ನು ಗೌರವಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಕ್ಷಮೆಯಿರಲಿ... ಪ್ರೀತಿಯೊಂದಿಗೆ ಗೆಳೆತನವನ್ನೂ ಧಿಕ್ಕರಿಸಿ


ನಿಂತಿದ್ದಕ್ಕೆ... ಬಾಳಹಾದಿಯಲ್ಲಿ ಮುಂದೆಂದಾದರೂ ಸಿಗುವುದಿದ್ದರೆ ಒಂದು ನಗು ಚೆಲ್ಲು ನಿನ್ನ ಬಾಳಸಂಗಾತಿಯೊಂದಿಗೆ...ಅಷ್ಟು ಸಾಕು...

ನಾನಂದುಕೊಂಡಿದ್ದೆ
ನೀನೇ ನನ್ನ ನೆಚ್ಚಿನ ಗೆಳತಿ
ಆದರೆ ನೀನೇಕಾದೆ
ನನ್ನ ಬಾಳಿನ ಸವತಿ
ಗೆಳೆಯ ಬರೆದ ಗೆಳತಿಯ ಕವನ
ಎನ್ನ ಮನದ ಖಾಲಿ ಪುಟದಿ
ಗೀಚಲಾರೆಯ ಒಲವಿನ ಕವನ...
ಬಿಡಿಸಬಾರದೆ ನಗು ಚಿತ್ತಾರ..
ಬಣ್ಣ ಬರೆದ ಮೇಲೆ ಸಹಿ ಹಾಕಲೇ ಬೇಕು
ದಾರ ಕಡಿದರೆ ಎಲ್ಲವೂ ಹಾರಿ ಹೋಗುವುದು
ಒಂದೇ ಒಂದು ಪದ ಗೀಚು ಬಾ
ಹೃದಯ ನೋವ ನೀಗು ಬಾ
ತೆರೆದೆ ಇರುವುದು ಎಂದೂ
ಬರೆಯದೆ ಬರಿದಾಗಿ
ನಿನ್ನ ಬರುವಿಕೆಗಾಗಿ
ಕಾಯುತ್ತಿರುವುದು ಕನಸ ಕೈಚೀಲದೊಳಗೆ...