
ಯಾಕೋ ಗೊತ್ತಿಲ್ಲ ಬದಲಾವಣೆ ಅಂದರೆ ಇದೇನಾ ಅಂತ ಅನಿಸೋಕೆ ಶುರುವಾಗಿದೆ. ಹಿಂದೆಲ್ಲಾ ಕತ್ತಲ್ಲಲ್ಲಿ ಕಣ್ಣರಳಿಸಿ ಕೂರುವುದು ಅಂದರೆ ಪ್ರಾಣ ಬಿಡುತ್ತಿದ್ದೆ, ಅದೇ ಜಗಲಿಯಲ್ಲಿ ಕಾಲು ಚಾಚಿ ಮಲಗಿ ನಕ್ಷತ್ರಗಳನ್ನು ಎಣಿಸುವುದರಲ್ಲಿ ನಾ ಕಳೆದು ಹೋಗುತ್ತಿದ್ದೆ. ಅಂದೆಲ್ಲಾ ಮೌನದೇವತೆ ಇಷ್ಟವಾಗುತ್ತಿದ್ದಳು.
ಆದರೆ ಇಂದು ಒಂದು ಕ್ಷಣ ಸುಮ್ಮನಿರುವುದೆಂದರೂ ಏನೋ ಆಲಸ್ಯ, ಜಡತನ. ಕತ್ತಲಲ್ಲಿ ಕಳೆದು ಹೋಗುವೆನೆಂಬ ಭಯ ಕಾಡಿ ಪಕ್ಕನೆ ಮೇಣದ ಬತ್ತಿ ಹಚ್ಚಿಟ್ಟು ಹರಟೆ ಹೊಡೆಯಲು ಆರಂಭಿಸುತ್ತೇನೆ. ಮತ್ತೆ ಆ ನಕ್ಷತ್ರಲೋಕ ಮಕ್ಕಳಾಟ ಎನಿಸತೊಡಗಿದೆ.
ಯಾಕೆ ಹೀಗೆ...?ಇದು ಎಂದಿನಿಂದ ಹೀಗೆ ಯೋಚಿಸುತ್ತಾ ಕುಳಿತಿದ್ದೇನೆ... ಆದರೆ ನಿನ್ನ ಹೊರತಾಗಿ ಮನ ಬೇರೇನನ್ನೂ ನೆನಪಿಸಿಕೊಳ್ಳುವುದೇ ಇಲ್ಲ. ಅದು ಹೇಗೆ ನೀ ನನ್ನ ಮನಸ್ಸೆಂವ ಜೋಕಾಲಿಯ ಜೊತೆಗಾತಿಯಾದೆಯೋ ದೇವರೇ ಬಲ್ಲ... ಬಂದ ಹಾಗೆ ಮನಸಿಗೆ ಗಾಯ ಮಾಡಿ ಅಂತರ್ಗತನಾದೆಯಲ್ಲ ಯಾಕೆ? ಕಣ್ಣುಗಳಿಂದಲೇ ಸದೆಬಡಿಯುವ ನಿನ್ನ ನೋಟ ಮನದಲ್ಲೇ ತಾಜ್ಮಹಲ್ ಕಟ್ಟುವ ಮೌನ ಪ್ರೀತಿ ಇವೆಲ್ಲ ನನಗೆ ಇಷ್ಟವಾಗಿತ್ತು. ಆದರೆ ಈಗ ಅದು ಬರೀ ನೆನಪು ಮಾತ್ರ.
ನೀ ಬರುವ ಮೊದಲು ಎಲ್ಲವೂ ಸರಿಯಿತ್ತು ನೋಡು. ನಾ ನಾನಾಗಿ ನನ್ನೊಳಗೆ ಅವಿತಿದ್ದೆ, ನನ್ನದೇ ಪ್ರಪಂಚ ನೂರೆಂಟು ಕನಸುಗಳು. ಹುಡುಗಿಯರ ಮನಸ್ಸು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲವೋ ಪೆದ್ದು...
ಅದೆಲ್ಲಾ ಬಿಡು. ನನ್ನ ಬದಲಾವಣೆಗಳಿಗೆ ಉತ್ತರ ಹುಡುಕುತ್ತಾ ಹೊರಟು ನಿನ್ನ ದೂಷಿಸುವುದರಲ್ಲಿ ಅರ್ಥವಿಲ್ಲ ಅಲ್ಲವೇ. ಮತ್ತೆ ನಾ ಮೊದಲಿನಂತಾಗಬೇಕು. ನಿನ್ನೊಳಗೆ ನಾ ಪೂರ್ತಿ ಕರಗಿ ಹೋಗುವ ಮುನ್ನ ಎಚ್ಚೆತ್ತುಕೊಳ್ಳಬೇಕು... ಅದಕ್ಕೇನು ಮಾಡುವುದು ಹೇಳು...?
nice re . i like your play with words ...
ReplyDelete