Monday, February 1, 2010

ಹೀಗಿರಲಿ ಬರವಣಿಗೆ....


ಗೆಳೆಯನೊಬ್ಬ ನನ್ನ ಬರಹ ಹಲವು ಬಾರಿ ಪ್ರಯತ್ನಿಸಿದರೂ ಪತ್ರಿಕೆಯಲ್ಲಿ ಪ್ರಕಟವಾಗಲಿಲ್ಲ ಎಂದು ಅವಲತ್ತುಕೊಂಡ. ನಾನೂ ಬಹಳ ಯೋಚಿಸಿ ನೀನು ಮೊದಲ ಬಾರಿ ಬರೆದ ಅನುಭವವನ್ನೇ ರೋಮಾಂಚಕವಾಗಿ ರಸವತ್ತಾಗಿ ಬರೆ ಎಂದು ಕಿವಿಮಾತು ಹೇಳಿದೆ. ಆತ ಅದನ್ನೇ, ಬರೆದೆ... ಹರಿದೆ... ಮತ್ತೆ ಬರೆದೆ...ಎಂದು ಆರಂಭಿಸಿ ನಾಟಕೀಯವಾಗಿ ಬರಿದಿದ್ದ. ಮುಂದಿನ ವಾರವೇ ಅದು ರಾಜ್ಯ ಮಟ್ಟದ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು.
ಮೊದಲ ಬಾರಿ ತನ್ನ ಹೆಸರು ಪತ್ರಿಕೆಯಲ್ಲಿ ಪ್ರಕಟವಾದಾಗ ದೊರೆಯುವ ಸಂತಸವಿದೆಯಲ್ಲಾ ಅಬ್ಬಾ ಅದನ್ನು
ಅಕ್ಷರಗಳಲ್ಲಿ ಹೇಳಲು ಸಾಧ್ಯವಿಲ್ಲ. ಗುರುತು ಪರಿಚಯವಿರುವವರಿಗೆಲ್ಲಾ ಫೋನಾಯಿಸಿ ಮೆಸೇಜುಗಳ ಮುಖಾಂತರ ತಿಳಿಸಿ ಬೀಗುವ ಪರಿ ನೋಡಬೇಕು.ಒಮ್ಮೆ ಬರವಣಿಗೆಯ ಹಿಡಿತ ದೊರಕಿತೆಂದರೆ ಮತ್ತೆ ಆತ ಹಿಂದಿರುಗಿ ನೋಡಲಾರ.
ಬರವಣಿಗೆ ಎಂಬುದು ವ್ಯಕ್ತಿತ್ವವನ್ನು ಬೆಳೆಸುತ್ತದೆ. ಕೆಲವರಿಗೆ ಮನಸ್ಸಲ್ಲಿ ತೋಚಿದ್ದೆಲ್ಲಾ ಗೀಚುವ ಹವ್ಯಾಸವಾದರೆ ಇನ್ನು ಕೆಲವರಿಗೆ ಅದೊಂದು ವೃತ್ತಿಪರತೆ. ಅದರಲ್ಲೂ ಮುಖ್ಯವಾಗಿ ಪತ್ರಿಕೋದ್ಯಮ ವಿದ್ಯಾಥರ್ಿಗಳಿಗೆ ಬರವಣಿಗೆ ಜೀವನಾಡಿ ಇದ್ದಂತೆ. ಯಾವುದೇ ವಿಷಯದ ಬಗ್ಗೆ ಪುಟಗಟ್ಟಲೆ ಬರೆಯುವ ಸಾಮಥ್ರ್ಯ ಅವರಿಗಿರಬೇಕು. ಮಾರುಕಟ್ಟೆಗೆ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಕೇಳುವ ಮೊದಲ ಪ್ರಶ್ನೆಯೇ 'ಎಷ್ಟು ಬೈಲೈನ್ ಬಂದಿದೆ?'
ಉತ್ತಮ ಬರವಣಿಗೆಗೆ ಇರಲೇ ಬೇಕಾದ ಕೆಲವು ಅಂಶಗಳೆಂದರೆ ಸ್ಪಷ್ಟತೆ ಹಾಗು ನಿಖರತೆ. ಚಿಕ್ಕದಾಗಿ ಚೊಕ್ಕದಾಗಿ ಬರೆದಷ್ಟೂ ಅದರ ಮೌಲ್ಯ ಹೆಚ್ಚುತ್ತದೆ. ಆಕರ್ಷಕ ಆರಂಭ-ಅಂತ್ಯಗಳೆರಡೂ ಬಹಳ ಮುಖ್ಯ. ಜೊತೆಗೆ ಹಲವು ಬಾರಿ ಹಣೆಬರಹಗಳು ಬರಹದ ತಲೆಬರಹವನ್ನು ನಿರ್ಧರಿಸುತ್ತದೆ. ಉತ್ತಮ ವಿಷಯದ ಆಯ್ಕೆಯೂ ಬಹಳ ಮುಖ್ಯ. ಕಾಲಕ್ಕನುಗುಣವಾಗಿ( ದೀಪಾವಳಿ ಸಮಯದಲ್ಲಿ ಹಬ್ಬ ಆಚರಣೆಗಳ ಕುರಿತು) ಬರೆಯುವುದನ್ನು ಕಲಿತಿರಬೇಕು. ಧೋ ಎಂದು ಸುರಿಯುತ್ತಿರುವ ಮಳೆಗಾಲದಲ್ಲಿ ಬೇಸಿಗೆಕಾಲದ ಉಡುಪುಗಳ ಬಗ್ಗೆ ಬರೆದರೆ ಅದು ನಿರ್ಲಕ್ಷ್ಯಗೊಳ್ಳುವ ಸಾಧ್ಯತೆಗಳೇ ಹೆಚ್ಚು.
ಆರಂಭದಲ್ಲೇ ತಿಂಗಳಲ್ಲಿ ಬರುವ ಜಾತ್ರೆ ಹಬ್ಬ ವಿಶೇಷ ದಿನಗಳನ್ನು ಪಟ್ಟಿಮಾಡಿಟ್ಟುಕೊಂಡು ಅದಕ್ಕನುಗುಣವಾಗಿ ಬರೆಯುವುದು ಜಾಣತನ. ಅಲ್ಲದೆ ಬರೆಯುವ ಮೊದಲೇ ಪ್ರಕಟಿಸುವ ಮಾಧ್ಯಮದ ಕುರಿತಾಗಿ ತಿಳಿದುಕೊಂಡಿರಬೇಕು. ಯಾವ ಪತ್ರಿಕೆ, ನಿಯತಕಾಲಿಕೆ, ಯಾವ ಶೈಲಿಯ ಬರಹಗಳನ್ನು ಆಹ್ವಾನಿಸುತ್ತದೆ, ಸ್ವೀಕರಿಸುತ್ತದೆ ಎಂಬುದರ ಅರಿವಿರಬೇಕು. ಬರಹವನ್ನು ಗುರುಗಳಿಂದ ಗೆಳೆಯರಿಂದ ತಿದ್ದಿಸಿಕೊಳ್ಳುವುದು ಇನ್ನೂ ಉತ್ತಮ.
ಬರವಣಿಗೆ ನಮ್ಮನ್ನು ನಾಲ್ಕು ಜನರಿಗೆ ಪರಿಚಯಿಸುತ್ತದೆ ಅಲ್ಲದೆ ಸಣ್ಣ ಮಟ್ಟದ ಪಾಕೆಟ್ ಮನಿಯನ್ನೂ ಒದಗಿಸುತ್ತದೆ. ಇಷ್ಟೆಲ್ಲಾ ಲಾಭವಿದೆ ಎಂದ ಮೇಲೂ ಸುಮ್ಮನೆ ಕುಳಿತಿರೇಕೆ? ಇಂದೇ ಆರಂಭಿಸಿ ಯಾರಿಗೊತ್ತು ನಿಮ್ಮೊಳಗೂ ಒಬ್ಬ ಎಂ.ವಿ ಕಾಮತ್, ಖುಷ್ವಂತ್ ಸಿಂಗ್ ಅಡಗಿ ಕುಳಿತಿರಬಹುದಲ್ಲಾ...?

1 comment: